ಕಸಾಪ ಅಧ್ಯಕ್ಷರ ಆಡಳಿತಾವಧಿ ಮೂರರಿಂದ ಐದು ವರ್ಷಗಳಿಗೆ ಏರಿಕೆ

ಉಡುಪಿ: ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷರ ಆಡಳಿತಾವಧಿಯನ್ನು ಮೂರರಿಂದ ಐದು ವರ್ಷಗಳಿಗೆ ಏರಿಸುವುದು ಸಹಿತ ಒಟ್ಟು 13 ಪ್ರಸ್ತಾವಗಳಿಗೆ ಪರಿಷತ್‌ನ ಸರ್ವ ಸದಸ್ಯರ ವಿಶೇಷ ಸಭೆ ಅನುಮೋದನೆ ನೀಡಿದೆ.

ಕಸಾಪ ರಾಜ್ಯಾಧ್ಯಕ್ಷ ಮನು ಬಳಿಗಾರ್‌ ಅಧ್ಯಕ್ಷತೆಯಲ್ಲಿ ಗುರುವಾರ ಉಡುಪಿಯ ಕೋಟ ಕಾರಂತ ಕಲಾಭವನದಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಈ ಸಂಬಂಧ ಉಡುಪಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಕಸಾಪ ಅಧ್ಯಕ್ಷ ಮನುಬಳಿಗಾರ್‌, ಉಪಸ್ಥಿತರಿದ್ದ 802 ಸದಸ್ಯರಲ್ಲಿ ಕೇವಲ ಏಳು ಮಂದಿ ತಿದ್ದುಪಡಿಗಳಿಗೆ ವಿರೋಧ ವ್ಯಕ್ತಪಡಿಸಿದರು. ವಿರೋಧ ವ್ಯಕ್ತಪಡಿಸಿದ ಸದಸ್ಯರಲ್ಲಿ ಮೂವರ ಅನಿಸಿಕೆಗಳನ್ನು ಕೇಳಲಾಯಿತು. ಮತ್ತೂಮ್ಮೆ ತಿದ್ದುಪಡಿಯ ಪರವಾಗಿರುವವರನ್ನು ಕೈ ಎತ್ತುವ ಮೂಲಕ ಗುರುತಿಸಿ ಬಹುಮತ ಪಡೆಯಲಾಯಿತು. ಕೊನೆಯಲ್ಲಿ ಎಲ್ಲ ತಿದ್ದುಪಡಿ ವಿಧೇಯಕ ಬಹುಮತದಿಂದ ಅಂಗೀಕಾರಗೊಂಡಿದೆ ಎಂದು ಹೇಳಿದ ರು.

ಎರಡು ಲಕ್ಷ ಸದಸ್ಯರಿರುವಾಗ ಚುನಾವಣೆಗೆ 45 ಲಕ್ಷ ರೂ. ಖರ್ಚಾಗುತ್ತಿತ್ತು. ಈಗ 3 ಲಕ್ಷ ಸದಸ್ಯರಿದ್ದಾರೆ. ಈಗ ಚುನಾವಣೆಗೆ 65-70 ಲಕ್ಷ ರೂ. ಅಗತ್ಯವಿದೆ. ಹೀಗಾಗಿ ಐದು ವರ್ಷಗಳಿಗೆ ಏರಿಸಲಾಗಿದೆ ಎಂದು ನಿರ್ಧಾರವನ್ನು ಸಮರ್ಥಿಸಿಕೊಂಡರು.

20 ವರ್ಷಗಳಲ್ಲಿ ಇಂತಹ ಸಭೆ ನಡೆದಿರಲಿಲ್ಲ, ಇದೊಂದು ಐತಿಹಾಸಿಕ ಸಭೆ ಎಂದರು. ವಿಶೇಷವೆಂದರೆ, ಈ ಸಭೆಯನ್ನು ಬಿಗಿ ಪೊಲೀಸ್‌ ಬಂದೋಬಸ್ತ್ ನಲ್ಲಿ ನಡೆಸಲಾಯಿತು. ಸಭೆಯ ನಡಾವಳಿಗಳನ್ನು ವಿಡಿಯೋ ಚಿತ್ರೀಕರಣ ಮಾಡಲಾಯಿತು.

Leave a Reply

Your email address will not be published. Required fields are marked *