ಕಾಂಗ್ರೆಸ್‍ ನಿರ್ಗಮನಕ್ಕೆ ಕೌಂಟ್‍ಡೌನ್ ಪ್ರಾರಂಭವಾಗಿದೆ: ಮಾಜಿ ಡಿಸಿಎಂ ಆರ್. ಅಶೋಕ್

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಆಧುನಿಕ ಭಸ್ಮಾಸುರ. ಈಗಾಗಲೇ ಜೆಡಿಎಸ್‍ನ ಮುಗಿಸಿರುವ ಅವರು ವಿಧಾನಸಭೆ ಚುನಾವಣೆ ಬಳಿಕ ಕಾಂಗ್ರೆಸ್‍ನ್ನು ಮುಗಿಸಿ ಮನೆಗೆ ಹೋಗಲಿದ್ದಾರೆ ಎಂದು ಬಿಜೆಪಿ ಮುಖಂಡ ಆರ್.ಅಶೋಕ್ ಭವಿಷ್ಯ ನುಡಿದಿದ್ದಾರೆ.

ಬೆಂಗಳೂರು ವರದಿಗಾರರ ಕೂಟ ಹಾಗೂ ಬೆಂಗಳೂರು ಪ್ರೆಸ್‍ಕ್ಲಬ್ ಏರ್ಪಡಿಸಿದ್ದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಜನತೆಗೆ ಯಾವುದೇ ರೀತಿಯ ಸಹಾಯ ಮಾಡಿಲ್ಲ. ಕಾಂಗ್ರೆಸ್‍ನ ನಿರ್ಗಮನಕ್ಕೆ ಕೌಂಟ್‍ಡೌನ್ ಪ್ರಾರಂಭವಾಗಿದೆ ಎಂದರು.

ಸಿದ್ದರಾಮಯ್ಯ ಜಾತಿ ಮತ್ತು ಧರ್ಮಗಳ ನಡುವೆ ವಿಷ ಬೀಜ ಬಿತ್ತಿದ್ದಾರೆ. ಈ ಚುನಾವಣೆಯಲ್ಲಿ ಅದು ಕಾಂಗ್ರೆಸ್‍ಗೆ ತಿರುಗು ಬಾಣವಾಗಲಿದೆ. ವಿಧಾನಸಭೆ ಚುನಾವಣೆ ಫಲಿತಾಂಶದ ಬಳಿಕ ಕಾಂಗ್ರೆಸ್‍ಗೆ ಕೊನೆಯ ಮೊಳೆ ಹೊಡೆಯಲಿದ್ದಾರೆ ಎಂದು ಟೀಕಿಸಿದರು.

ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ಸರ್ಕಾರ ನಿದ್ದೆ ಮಾಡುವುದರಲ್ಲಿ ಕಾಲ ಕಳೆದರು. ಆರು ತಿಂಗಳ ನಂತರ ನಿದ್ದೆಯಿಂದ ಎದ್ದು ಈಗ ನಾವು ಅದನ್ನು ಮಾಡಿದ್ದೇವೆ, ಇದನ್ನು ಮಾಡಿದ್ದೇವೆ ಎಂದು ಅಬ್ಬರಿಸುತ್ತಿದ್ದಾರೆ. ಇವರ ಸುಳ್ಳು ಮಾತುಗಳನ್ನು ಕೇಳಲು ರಾಜ್ಯದ ಜನತೆ ಮೂರ್ಖರೇ ಎಂದು ಅಶೋಕ್ ಪ್ರಶ್ನಿಸಿದರು.

ರಾಜ್ಯದಲ್ಲಿ ಈ ಬಾರಿ ಬಿಜೆಪಿ ಸ್ವಂತ ಬಲದ ಮೇಲೆ ಅಧಿಕಾರ ಹಿಡಿಯುವುದರಲ್ಲಿ ಯಾವುದೇ ಸಂಶಯವಿಲ್ಲ. ಇದು ಗೊತ್ತಾಗಿಯೇ ಅಧಿಕಾರ ಕಳೆದುಕೊಳ್ಳುವ ಭೀತಿಯಲ್ಲಿರುವ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರು ನಮ್ಮ ವಿರುದ್ದ ಮನಬಂದಂತೆ ಮಾತನಾಡುತ್ತಿದ್ದಾರೆ. ಫಲಿತಾಂಶ ಬಂದಾಗ ಗೊತ್ತಾಗುತ್ತದೆ ಎಂದು ಹೇಳಿದರು.  ಕೇಂದ್ರ ಸರ್ಕಾರದ ಸಾಧನೆಗಳು ಬಿಜೆಪಿಗೆ ನೆರವಾಗಲಿದೆ. ರಾಜ್ಯ ಸರ್ಕಾರ ಎಲ್ಲ ಕ್ಷೇತ್ರಗಳಲ್ಲೂ ವಿಫಲವಾಗಿದೆ.

ಮತದಾರ ಎಲ್ಲವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾನೆ. ಕಾಂಗ್ರೆಸ್ ಪಕ್ಷವನ್ನು ಅಧಿಕಾರದಿಂದ ಕೆಳಗಿಳಿಸಲು ಮತದಾರರು ತುದಿಗಾಲಿನಲ್ಲಿದ್ದಾರೆ ಎಂದು ಹೇಳಿದರು.

ಬೆಂಗಳೂರಿಗೆ ಪ್ರತ್ಯೇಕ ಪ್ರಣಾಳಿಕೆ: ವಿಶ್ವದಲ್ಲೇ ಅತಿ ವೇಗವಾಗಿ ಬೆಳೆಯುತ್ತಿರುವ ಬೆಂಗಳೂರಿಗೆ ಪ್ರತ್ಯೇಕ ಪ್ರಣಾಳಿಕೆಯನ್ನು ಸಿದ್ದಪಡಿಸಿದ್ದೇವೆ. ಇಲ್ಲಿನ ಜನರ ಆಶೋತ್ತರಗಳಿಗೆ ತಕ್ಕಂತೆ ಕಾಲ ಮಿತಿಯೊಳಗೆ ಈಡೇರಿಸಬಹುದಾದ ಭರವಸೆಗಳನ್ನು ನೀಡಿದ್ದೇವೆ. ಬಿಬಿಎಂಪಿಯಲ್ಲಿ ನೇರ ಮೇಯರ್ ಆಯ್ಕೆ ಮಾಡುವ ಸಂಬಂಧ ಹಾಲಿ ಇರುವ ಕಾಯ್ದೆಗೆ ತಿದ್ದುಪಡಿ ಮಾಡಲಾಗುವುದು.

ನಾಡಪ್ರಭು ಕೆಂಪೇಗೌಡ ನಿರ್ಮಾತೃ ಬೆಂಗಳೂರು ಒಂದೇ ಆಗಿರಬೇಕೆಂಬುದು ಜನರ ಆಶಯ.ಯಾವುದೇ ಕಾರಣಕ್ಕೂ ಬೆಂಗಳೂರನ್ನು ಇಬ್ಬಾಗಿಸಲು ಬಿಜೆಪಿ ಅವಕಾಶ ನೀಡುವುದಿಲ್ಲ ಎಂದು ಅವಕಾಶ ನೀಡುವುದಿಲ್ಲ ಎಂದರು. ನನ್ನ ವಿರುದ್ದ ಯಾರೇ ಸ್ಪರ್ಧಿಸಿದರೂ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ಮೊದಲ ಚುನಾವಣೆಯಲ್ಲೇ ನಾನು ಹೆಚ್ಚಿನ ಮತಗಳಿಂದ ಗೆದ್ದಿದ್ದೇನೆ. ಯಾರೇ ಕಣದಲ್ಲಿದ್ದರೂ ಅವರ ಬಗ್ಗೆ ಉದಾಸೀನ ತೋರದೆ ಗಂಭೀರವಾಗಿಯೇ ಚುನಾವಣೆ ಎದುರಿಸುತ್ತೇನೆ ಎಂದು ಹೇಳಿದರು.

ಜನಾರ್ದನ ರೆಡ್ಡಿ ಬಗ್ಗೆ ಮಾತನಾಡುವುದಿಲ್ಲ: ಜನಾರ್ದನ ರೆಡ್ಡಿ ನಮ್ಮ ಪಕ್ಷದವರು ಅಲ್ಲ. ನಾನು ಅವರ ಬಗ್ಗೆ ಮಾತನಾಡುವುದಿಲ್ಲ ಎಂದು ಆರ್​. ಅಶೋಕ್​ ಿದೇ ವೇಳೆ ಹೇಳಿದರು.

ನಮ್ಮ ಪಕ್ಷದ ಪರವಾಗಿ ರಾಜ್ಯದಲ್ಲಿ ಯಾರಬೇಕಾದರೂ ಪ್ರಚಾರ ಮಾಡಬಹುದು‌. ಅದರಂತೆ ‌ಜನಾರ್ದನ ರೆಡ್ಡಿಯವರು ಪ್ರಚಾರ ಮಾಡಿರಬಹುದು ಎಂದು ಸ್ಪಷ್ಟನೆ ನೀಡಿದರು. ಈಗಾಗಲೇ ಈ ಬಗ್ಗೆ ನಮ್ಮ ರಾಷ್ಟ್ರೀಯ ಅಧ್ಯಕ್ಷರು ಕೂಡ ಸ್ಪಷ್ಟನೆ ಕೊಟ್ಟಿದ್ದಾರೆ. ಅದರಂತೆ ಜನಾರ್ದನ ರೆಡ್ಡಿಗೂ ನಮ್ಮ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದರು.

Leave a Reply

Your email address will not be published. Required fields are marked *