ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಗೆದ್ದ ಆರ್’ಸಿಬಿ: ಮುಂಬೈ ಮಣಿಸಿ ಗೆದ್ದು ಬೀಗಿದ ಬೆಂಗಳೂರು

ಬೆಂಗಳೂರು: 2018ನೇ ಸಾಲಿನ ಐಪಿಎಲ್‌ ಕ್ರಿಕೆಟ್‌ ಟೂರ್ನಿಯ ಸತತ ಸೋಲು ಕಂಡು ಆಘಾತ ಅನುಭವಿಸಿದ್ದ ಆರ್’ಸಿಬಿ ಮುಂಬೈ ವಿರುದ್ಧದ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಗೆದ್ದು ಬೀಗಿದೆ.

ಮಂಗಳವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಮುಂಬೈ ಇಂಡಿಯನ್ಸ್‌ ವಿರುದ್ಧದ ಪಂದ್ಯದಲ್ಲಿ ವಿರಾಟ್‌‌ ಕೊಹ್ಲಿ ಪಡೆ 14 ರನ್‌‌ಗಳ ರೋಚಕ ಗೆಲುವು ಸಾಧಿಸಿದೆ.

ಬೆಂಗಳೂರು ಹಾಗೂ ಮುಂಬೈ ತಂಡಗಳಿಗೆ ಮಂಗಳವಾರದ ಪಂದ್ಯ ಒಂದು ರೀತಿಯಲ್ಲಿ ಮಾಡು ಇಲ್ಲವೇ ಮಡಿಯಾಗಿತ್ತು. ಇದರಲ್ಲಿ ಬೆಂಗಳೂರು ತಂಡ ಬೌಲರ್‌ಗಳ ಮಾರಕ ದಾಳಿಯಿಂದ ಮುಂಬೈ ತಂಡವನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾದರು.

ಟಾಸ್‌ ಗೆದ್ದ ಮುಂಬೈ ತಂಡದ ನಾಯಕ ರೋಹಿತ್‌ ಶರ್ಮಾ ಮೊದಲು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡರು. ಟಾಸ್‌ ಸೋತು ಬ್ಯಾಟಿಂಗ್‌ ನಡೆಸಿದ ವಿರಾಟ್‌ ಕೊಹ್ಲಿ ಪಡೆ ನಿಗದಿತ 20 ಓವರ್‌‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 167 ರನ್‌ಗಳನ್ನಷ್ಟೇ ಕಲೆ ಹಾಕಲು ಶಕ್ತವಾಯಿತು.

ಆರ್‌ಸಿಬಿ ಪರ ಮನನ್‌ ವೊಹ್ರಾ 45, ಬ್ರೆಂಡನ್‌ ಮೆಕ್ಲಮ್‌ 37, ನಾಯಕ ವಿರಾಟ್‌ ಕೊಹ್ಲಿ 32 ಹಾಗೂ ಕಾಲಿನ್‌ ಡಿ ಗ್ರ್ಯಾಂಡ್‌ಹೋಮ್ ಅಜೇಯ 23 ರನ್‌ ಸಿಡಿದರು. ಮುಂಬೈ ಪರ ಹಾರ್ದಿಕ್‌ ಪಾಂಡ್ಯ 3 ವಿಕೆಟ್‌ ಕಿತ್ತು ಮಿಂಚಿದರೆ, ಮಿಚೆಲ್‌ ಮೆಕ್‌ಲೆಂಗಾನ್‌, ಬೂಮ್ರಾ 1 ಹಾಗೂ ಮಯಂಕ್‌ ಮಾರ್ಕಂಡ್‌ ತಲಾ 1 ವಿಕೆಟ್‌ ಪಡೆದರು.

ಇತ್ತ, 168 ರನ್‌ಗಳ ಗೆಲುವಿನ ಗುರಿ ಬೆನ್ನತ್ತಿದ ರೋಹಿತ್ ಶರ್ಮಾ ಪಡೆ ಆರ್‌ಸಿಬಿಯ ಟಿಮ್‌ ಸೌಥಿ, ಉಮೇಶ್‌ ಯಾದವ್‌, ಮೊಹಮ್ಮದ್‌ ಸಿರಾಜ್‌ ಪರಿಣಾಮಕಾರಿ ಬೌಲಿಂಗ್‌ ನಲುಗಿತು. 20 ಓವರ್‌ಗಳಲ್ಲಿ 7 ವಿಕೆಟ್‌‌ಗಳ ನಷ್ಟಕ್ಕೆ 153 ರನ್‌ಗಳಷ್ಟೇ ಪೇರಿಸಿ ಮುಂಬೈ ತಂಡ ಸೋಲೊಪ್ಪಿಕೊಂಡಿತು.

ಈ ನಡುವೆ ಮುಂಬೈ ಪರ ಹಾರ್ದಿಕ್‌ ಪಾಂಡ್ಯ ಬ್ಯಾಟಿಂಗ್‌ನಲ್ಲೂ ಮಿಂಚಿ ಗಮನ ಸೆಳೆದರು. 42 ಎಸೆತಗಳಲ್ಲಿ 50 ರನ್‌ಗಳನ್ನು ಬಾರಿಸಿದ ಪಾಂಡ್ಯ ತಂಡದ ಗೆಲುವಿಗಾಗಿ ಹೋರಾಡಿದರು.

ಆದರೆ, ಕೊನೆಯ ಓವರ್‌ನಲ್ಲಿ ಮುಂಬೈ ಜಯಕ್ಕೆ 25 ರನ್‌ಗಳು ಬೇಕಿತ್ತು. ಆಗ ಓವರ್‌ನ ಮೊದಲ ಎಸೆತದಲ್ಲೇ ಪಾಂಡ್ಯ ವಿಕೆಟ್‌ ಬಿತ್ತು. ಪರಿಣಾಮ ಎಂಬಂತೆ ಅಂತಿಮ ಓವರ್‌‌ನಲ್ಲಿ ಮುಂಬೈ ತಂಡ 10 ರನ್‌ಗಳನ್ನು ಗಳಿಸಿ 14 ರನ್‌ಗಳಿಂದ ಸೋಲು ಕಂಡಿತು.

Leave a Reply

Your email address will not be published. Required fields are marked *