ಮುಂದುವರೆದ ಆರ್’ಸಿಬಿ ಕಳಪೆ ಪ್ರದರ್ಶನ: ಹೈದರಾಬಾದ್ ತಂಡಕ್ಕೆ ಭರ್ಜರಿ ಗೆಲುವು, ಬೆಂಗಳೂರು ಅಭಿಮಾನಿಗಳಿಗೆ ಬೇಸರ

ಹೈದರಾಬಾದ್: ನಿರಂತರ ಸೋಲುಗಳಿಂದಾಗಿ ಕಂಗೆಟ್ಟಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮತ್ತೊಂದು ಸೋಲು ಕಂಡಿದ್ದು, ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ 5 ರನ್ ಗಳಿಂದ ಪರಾಜಯಗೊಂಡಿದೆ.

ಸೋಮವಾರ ಹೈದರಾಬಾದ್ ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಬೆಂಗಳೂರು ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡು ನಿಗದಿತ 20 ಓವರ್ ಗಳಿಗೂ ಮುನ್ನವೇ ಹೈದರಾಬಾದ್ ತಂಡವನ್ನು 146 ರನ್ ಗಳಿಗೆ ಆಲ್ ಔಟ್ ಮಾಡಿ ಪಂದ್ಯದ ಮೇಲೆ ಹಿಡಿತ ಸಾಧಿಸಿತ್ತು. ಬ್ಯಾಟಿಂಗ್ ನಲ್ಲಿಯೂ  ಆರಂಭಿಕ ಹಂತದಿಂದಲೂ ಆರ್ ಸಿಬಿ ಗೆಲುವಿನ ವಿಶ್ವಾಸ ಮೂಡಿಸಿತ್ತು. ಆದರೆ ತಂಡದ ನಾಯಕ ವಿರಾಟ್ ಕೊಹ್ಲಿ 30 ಎಸೆತಗಳಲ್ಲಿ 39 ರನ್ ಗಳಿಸಿ ಔಟ್ ಆಗುತ್ತಿದ್ದಂತೆಯೇ ಆರ್ ಸಿಬಿ ಪಂದ್ಯದ ಮೇಲಿನ ಹಿಡಿತ ಕಳೆದುಕೊಂಡಿತು.

ಆದರೂ ಕೊನೆ ಕ್ಷಣದವರೆಗೂ ಕಾಲಿನ್ ಡೆ ಗ್ರಾಂಡ್ಹೋಮ್ (29 ಎಸೆತಗಳಲ್ಲಿ 33 ರನ್)  ಹಾಗೂ ಮನ್ ದೀಪ್ ಸಿಂಗ್( 23 ಎಸೆತಗಳಲ್ಲಿ 21 ರನ್) ಹೈದರಾಬಾದ್ ತಂಡಕ್ಕೆ ಉತ್ತಮ ಪೈಪೋಟಿ ನೀಡಿದರು. ಕೊನೆಯ ಎಸೆತದಲ್ಲಿಯೂ 6 ರನ್ ಗಳಿಸುವ ಮೂಲಕ  ಆರ್ ಸಿಬಿಗೆ ಪಂದ್ಯ ಗೆಲ್ಲುವ ಸಾಧ್ಯತೆ ಇತ್ತು. ಆದರೆ ಕೊನೆಯ ಎಸೆತದಲ್ಲಿ  ಕಾಲಿನ್ ಡೆ ಗ್ರಾಂಡ್ಹೋಮ್ ಭುವನೇಶ್ವರ್ ಕುಮಾರ್ ಗೆ ವಿಕೆಟ್ ಒಪ್ಪಿಸುವ ಮೂಲಕ ಆರ್ ಸಿಬಿ ಹೈದರಾಬಾದ್ ತಂಡದ ವಿರುದ್ಧ 5 ರನ್ ಗಳ ಸೋಲು ಕಂಡಿತು.

ಕೋಹ್ಲಿ ಬೇಸರ: ಮಾಡು ಇಲ್ಲವೇ ಮಡಿ ಎಂಬಂತ್ತಿದ್ದ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಬೆಂಗಳೂರು ತಂಡ ಮುಗ್ಗರಿಸಿದ್ದು, ಕೊಹ್ಲಿ ಪಡೆಯ ಪ್ಲೇ ಆಫ್ ಕನಸು ಭಗ್ನಗೊಂಡಿದೆ.

ಆ ಮೂಲಕ ಇಷ್ಟು ದಿನ ಈ ಸಲ ಕಪ್ ನಮ್ದೇ ಎಂದು ಕೂಗುತ್ತಿದ್ದ ಅಭಿಮಾನಿಗಳ ಆಸೆಗೂ ಬೆಂಗಳೂರು ತಂಡದ ಆಟಗಾರರು ನೀರೆರಚಿದ್ದು. ತಂಡದ ಕಳಪೆ ಆಟವೇ ಸೋಲಿಗೆ ಕಾರಣ ಎಂದು ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.

ಪಂದ್ಯ ಮುಕ್ತಾಯದ ಬಳಿಕ ಮಾತನಾಡಿದ ಕೊಹ್ಲಿ, ‘ಕೈಯಲ್ಲಿದ್ದ ಗೆಲುವನ್ನು ನಾವೇ ಹಾಳು ಮಾಡಿಕೊಂಡೆವು. ನಿಜಕ್ಕೂ ಈ ಸೋಲನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನಿಜ ಹೇಳಬೇಕು ಎಂದರೆ ಎದುರಾಳಿ ತಂಡ ಗೆಲುವಿಗೆ ಅರ್ಹವಾಗಿತ್ತು. ಮೊದಲ ಆರು ಓವರ್ ಗಳನ್ನು ನಾವು ಉತ್ತಮವಾಗಿ ಎದುರಿಸಿದೆವು. ಆದರೆ ಆ ಬಳಿಕ ಪರಿಸ್ಥಿತಿಯೇ ಬದಲಾಗಿತ್ತು. ನಮ್ಮ ತಂಡದ ಬ್ಯಾಟ್ಸಮನ್ ಗಳ ಶಾಟ್ ಸೆಲೆಕ್ಷನ್ ಕೂಡ ಪ್ರಶ್ನಾರ್ಥವಾಗಿತ್ತು. ಇಂತಹ ಕಠಿಣ ಪರಿಸ್ಥಿತಿಯಲ್ಲಿ ಅಂತಹ ಹೊಡೆತಗಳ ಅವಶ್ಯಕತೆ ಇರಲಿಲ್ಲ ಎಂದು ಹೇಳಿದ್ದಾರೆ.

ಅಂತೆಯೇ ನಾವೇ ಎದುರಾಳಿ ತಂಡ ಪುಟಿದೇಳಲು ನಾವೇ ಅವಕಾಶ ಮಾಡಿಕೊಟ್ಟೆವು. ತಂಡದ ಫೀಲ್ಡಿಂಗ್ ಉತ್ತಮವಾಗಿತ್ತಾದರೂ ಇನ್ನೂ 10-15ರನ್ ಗಳನ್ನುನಾವು ಕಡಿತ ಮಾಡಬಹುದಿತ್ತು. ಬ್ಯಾಟಿಂಗ್ ಪಿಚ್ ಉತ್ತಮವಾಗಿರಲಿಲ್ಲ. ಆದರೆ ನಾವು ಬೌಲಿಂಗ್ ನಲ್ಲಿ ಉತ್ತಮ ಪ್ರದರ್ಶನ ತೋರಬಹುದಿತ್ತು. ಸೋಲಲು ನಾವು ಅರ್ಹರಾಗಿದ್ದೆವು ಎಂದು ಕೊಹ್ಲಿ ತಮ್ಮ ತಂಡದ ವಿರುದ್ಧ ಅಸಹನೆ ವ್ಯಕ್ತಪಡಿಸಿದ್ದಾರೆ.

ಅಂತೆಯೇ ಹೈದರಾಬಾದ್ ತಂಡದ ಪ್ರದರ್ಶನವನ್ನು ಮುಕ್ತ ಕಂಠದಿಂದ ಶ್ಲಾಘಿಸಿದ ಕೊಹ್ಲಿ, ಅಂತಿಮ ಓವರ್ ನಲ್ಲಿ ಗೆಲುವು ಕಸಿದ ಹೈದರಾಬಾದ್ ತಂಡದ ಬೌಲರ್ ಗಳಿಗೆ ಗೆಲುವಿನ ಶ್ರೇಯ ಸಲ್ಲಬೇಕು ಎಂದು ಹೇಳಿದರು.

Tags: , ,

Leave a Reply

Your email address will not be published. Required fields are marked *