ಮೋದಿ-ಷಾ ದಾಳಿಗೆ ಕರ್ನಾಟಕದಲ್ಲಿ ಕಾಂಗ್ರೆಸ್ ಧೂಳೀಪಟ: ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಬಿಜೆಪಿ

ಬೆಂಗಳೂರು: ರಾಜ್ಯ ವಿಧಾನಸಭೆಯ 222 ಕ್ಷೇತ್ರಗಳ ಪೈಕಿ ಬಿಜೆಪಿ 104 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದು, 104 ಕ್ಷೇತ್ರಗಳಲ್ಲೂ ಕಾರ್ಯಕರ್ತರ ಸಂಭ್ರಮ ಮುಗಿಲು ಮುಟ್ಟಿದೆ. ಬಿಜೆಪಿ ಕಚೇರಿ ಮುಂದೆ ಪಟಾಕಿ ಸಿಡಿಸಿ, ಸಿಹಿ ಹಂಚಿ ಗೆಲವನ್ನು ಸಂಭ್ಮಿಸಿದ್ದಾರೆ.

ಆದರೆ, ಸರಳ ಬಹುಮತ ಪಡೆಯುವಲ್ಲಿ ಬಿಜೆಪಿ ವಿಫಲವಾಗಿದ್ದು ಅತಂತ್ರ ವಿಧಾನಸಭೆ ಸೃಷ್ಟಿಯಾಗಿದೆ.  ಅತಿ ಹೆಚ್ಚಿನ ಸ್ಥಾನಗಳನ್ನು ಪಡೆಯುವ ಮೂಲಕ ದೊಡ್ಡ ಪಕ್ಷವಾಗಿ ಹೊಹೊಮ್ಮಿರುವ ಬಿಜೆಪಿ ಅಧಿಕಾರ ಹಿಡಿಯುವ ಎಲ್ಲಾ ಸಾಧ್ಯತೆಗಳೂ ಇದೆ ಎಂದು ರಾಜಕೀಯ ವಿಶ್ಲೇಶಕರು ಅಭಿಪ್ರಾಯಪಟ್ಟಿದ್ದಾರೆ.

ಇತ್ತ ಅತಂತ್ರ ವಿಧಾನಸಭೆ ಫಲಿತಾಂಶ ಹೊರ ಬೀಳುತ್ತಿದ್ದಂತೆ ಎಚ್ಚತ್ತ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ನಾಯಕರು ಜೆಡಿಎಸ್ ಜೊತೆ ಮೈತ್ರಿ ಕುದುರಿಸಲು ಕಸರತ್ತು ನಡೆಸಿದ್ದಾರೆ.

ಇತ್ತ ಬೆಂಗಳೂರಿನಕಾಂಗ್ರೆಸ್ ಕಛೇರಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಮಾತನಾಡಿ, ಜೆಡಿಎಸ್ ಪಕ್ಷಕ್ಕೆ ಸರ್ಕಾರ ರಚಿಸಲು ಬೆಂಬಲ ನೀಡುವುದಾಗಿ ಬಹಿರಂಗ ಹೇಳಿಕೆ ನೀಡಿದ್ದಾರೆ.

ಚುನಾವಣೆಯಲ್ಲಿ ಯಾವುದೇ ಪಕ್ಷವು ಸರಳ ಬಹುಮತವನ್ನು ಪಡೆಯುವಲ್ಲಿ ವಿಫಲವಾದಾಗ ಅತಂತ್ರ ವಿಧಾನಸಭೆಯಾಗುತ್ತದೆ. ಯಾವುದೇ ಪಕ್ಷ ಸರ್ಕಾರ ರಚಿಸಲು 112 ಸ್ಥಾನಗಳು ಅಗತ್ಯವಿದೆ.

78 ಸ್ಥಾನಗಳನ್ನು ಪಡೆದಿರುವ ಕಾಂಗ್ರೆಸ್, 38 ಸ್ಥಾನಗಳನ್ನು ಪಡೆದಿರುವ ಜೆಡಿಎಸ್‌ ಪಕ್ಷಕ್ಕೆ ಬೆಂಬಲ ನೀಡುವ ಮೂಲಕ ಮೈತ್ರಿ ಸರ್ಕಾರ ರಚನೆಗೆ ಮುಂದಾಗಿದೆ. ಆದರೆ ಬಿಜೆಪಿ ಸ್ವತಂತ್ರ ಅಭ್ಯರ್ಥಿಗಳ ಸಹಕಾರದೊಂದಿಗೆ ಸರ್ಕಾರ ರಚಿಸುವ ವಿಶ್ವಾಸ ಹೊಂದಿದೆ.

ಗೆಲುವಿಗೆ ಬಿಜೆಪಿ ನಾಯಕರ ಪ್ರತಿಕ್ರಿಯೆ: ಪ್ರಧಾನಿ ನರೇಂದ್ರಮೋದಿ ಅವರ  ಅಭಿವೃದ್ದಿ ಸಿದ್ದಾಂತದಿಂದ ಆಕರ್ಷಿತಗೊಂಡ ಜನತೆ ಕಾಂಗ್ರೆಸ್ ನ  ವಿಭಜನೆಯ ಸಿದ್ದಾಂತವನ್ನು ತಿರಸ್ಕರಿಸಿದ್ದಾರೆ ಎಂದು ಬಿಜೆಪಿಯ ಹಲವು ನಾಯಕರು ಪ್ರತಿಪಾದಿಸಿದ್ದಾರೆ.

ಮುಂಬರುವ ಲೋಕಸಭಾ ಚುನಾವಣೆಯಲ್ಲೂ ಕಾಂಗ್ರೆಸ್ ಪಕ್ಷ ಸೋಲಲಿದ್ದು, ರಾಹುಲ್ ಗಾಂಧಿ ಪ್ರಧಾನಿಯಾಗುವ ಕನಸು ಈಡೇರಿಸುವುದಿಲ್ಲ ಎಂದು ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.

ಇಂದು ಪಕ್ಷದ ಪಾಲಿಗೆ ಚಾರಿತ್ರಿಕ ದಿನವಾಗಿದ್ದು, ಕಾಂಗ್ರೆಸ್ ಪಕ್ಷದ ವಿಭಜನೆಯ , ನಕಾರಾತ್ಮಕ ರಾಜಕೀಯವನ್ನು ಜನತೆ ತಿರಸ್ಕರಿಸಿದ್ದು, ಮೋದಿ ಅವರ ಅಭಿವೃದ್ದಿ ಸಿದ್ದಾಂತವನ್ನು ಒಪ್ಪಿಕೊಂಡಿದ್ದಾರೆ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್  ಸಂತಸ ವ್ಯಕ್ತಪಡಿಸಿದ್ದಾರೆ.

 ಕರ್ನಾಟಕದ ಗೆಲುವಿನ ಬಳಿಕ ಬಿಜೆಪಿಗೆ ದಕ್ಷಿಣ ಬಾಗಿಲು ತೆರೆದಂತಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್ ಮಾದವ್ ಹೇಳಿದ್ದಾರೆ.

 ರಾಹುಲ್ ಗಾಂಧಿ ಎಐಸಿಸಿ ಅಧ್ಯಕ್ಷರಾದ ಬಳಿಕ ಮೂರನೇ ರಾಜ್ಯದ ಸೋಲಾಗಿದ್ದು, ವಿಪಕ್ಷಗಳು ಮೈತ್ರಿ ಮಾಡಿಕೊಂಡರೆ ಕಾಂಗ್ರೆಸ್ ಐದನೇ ಸ್ಥಾನಕ್ಕೆ ಹೋಗಲಿದೆ ಎಂದು ಕೇಂದ್ರ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋರ್ ಹೇಳಿದ್ದಾರೆ.

ಮತ್ತೊಂದೆಡೆ ಕರ್ನಾಟಕದ ಚುನಾವಣೆಯಲ್ಲಿ ಬಿಜೆಪಿ ಉತ್ತಮ ಸಾಧನೆ ಮಾಡಿರುವುದಕ್ಕೆ ಜಮ್ಮು- ಕಾಶ್ಮೀರದ ಮುಖ್ಯಮಂತ್ರಿ ಮೆಹಬೂಬಾ ಮುಪ್ತಿ ಪ್ರಧಾನಮಂತ್ರಿ ನರೇಂದ್ರಮೋದಿ ಅವರನ್ನು ಶ್ಲಾಘಿಸಿದ್ದಾರೆ.

ಸಂಬಧಿಸಿದ ಪೋಸ್ಟ್‌ಗಳು

Leave a Reply

Your email address will not be published. Required fields are marked *