ವಿಜೃಂಭಣೆಯಿಂದ ನಡೆದ ಇತಿಹಾಸ ಪ್ರಸಿದ್ಧ ಬೆಂಗಳೂರು ಕರಗ ಮಹೋತ್ಸವ

ಬೆಂಗಳೂರು: ಇತಿಹಾಸ ಪ್ರಸಿದ್ಧ ಬೆಂಗಳೂರು ಕರಗ ಮಹೋತ್ಸವ ಶನಿವಾರ ಮಧ್ಯರಾತ್ರಿಯಿಂದ ಭಾನುವಾರ ಮುಂಜಾನೆವರೆಗೆ ಅಪಾರ ಭಕ್ತಜನ ಸಮೂಹದ ನಡುವೆ ವಿಜೃಂಭಣೆಯಿಂದ ನೆರವೇರಿತು.

ವಿಲಂಬಿ ನಾಮ ಸಂವತ್ಸರದ ಚೈತ್ರ ಹುಣ್ಣಿಮೆ ದಿನವಾದ ಶನಿವಾರ ಮಧ್ಯರಾತ್ರಿ 12 ಗಂಟೆಗೆ ಸರಿಯಾಗಿ ಕರಗ ಶಕ್ತ್ಯೋತ್ಸವ ಮೆರವಣಿಗೆ ಹೊರಟಿತು. ಇದೇ ಮೊದಲ ಬಾರಿಗೆ ಕರಗ ಹೊತ್ತ ದ್ರೌಪದಿ ಸ್ವರೂಪದಲ್ಲಿದ್ದ ಅರ್ಚಕ ಮನು ಸಕಲ ವಿಧಿ ವಿಧಾನಗಳೊಂದಿಗೆ ಶಾಸ್ತ್ರೋಕ್ತವಾಗಿ ಪೂಜಾ ಕಾರ್ಯಗಳನ್ನು ನಡೆಸಿದರು. ಅವರಿಗೆ ಅರಿಸಿನ ಬಣ್ಣದ ಸೀರೆ ಉಡಿಸಿ, ಬಳೆ ತೊಡಿಸಿ ದ್ರೌಪದಿಯಂತೆ ಅಲಂಕಾರ ಮಾಡಲಾಗಿತ್ತು.

ಧರ್ಮರಾಯ ಸ್ವಾಮಿ ದೇವನಸ್ಥಾನದಿಂದ ಹೊರಟ ದ್ರೌಪದಿ ದೇವಿ ಪ್ರತೀಕವಾದ ಹೂವಿನ ಕರಗ ಕೆಂಪೇಗೌಡರ ಕೋಟೆಯ ಸರಹದ್ದಿನ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿತು. ವೈಭವಯುತವಾಗಿ ಸಿಂಗಾರಗೊಂಡಿದ್ದ ರಥದಲ್ಲಿ ಅರ್ಜುನ, ದ್ರೌಪದಿದೇವಿ ಉತ್ಸವ ಮೂರ್ತಿಗಳು ಹಾಗೂ ಮುತ್ಯಾಲಮ್ಮ ದೇವಿಯ ಉತ್ಸವ ಪ್ರತಿಮೆಗಳ ಸಾಲಂಕೃತ ಮೆರವಣಿಗೆ ಸಾಗಿದವು.

ಉತ್ಸವ ಸಾಗಿದ ರಸ್ತೆಗಳಲ್ಲಿ ಸಾಲುಗಟ್ಟಿ ನಿಂತಿದ್ದ ಸಾವಿರಾರು ಭಕ್ತರು ಕರಗದ ದರ್ಶನ ಪಡೆದು ಧನ್ಯತಾ ಭಾವ ಹೊಂದಿದರು. ಕರಗ ಮಹೋತ್ಸವ ಬೆಂಗಳೂರಿನ ಪ್ರಾಚೀನ ತಿಗಳರಪೇಟೆ, ಬಳೇಪೇಟೆ, ಕುಂಬಾರ ಪೇಟೆ, ಚಿಕ್ಕಪೇಟಿ ಸೇರಿದಂದೆ ವಿವಿಧ ಭಾಗಗಳಲ್ಲಿ ಸಂಚರಿಸಿತು. ಸಂಪ್ರದಾಯದಂತೆ ಅರಳಿಪೇಟೆಯಲ್ಲಿರುವ ಮಸ್ತಾನ್ ದರ್ಗಾಕ್ಕೆ ಕರಗ ಭೇಟಿ ನೀಡಿದ್ದು ಸೌಹಾರ್ದತೆಯ ಸಂಕೇತವಾಗಿತ್ತು.

ಹಿಂದೂಗಳ ಜತೆಗೂಡಿ ಮುಸ್ಲಿಂ ಬಾಂಧವರೂ ಸಹ ಉತ್ಸವದಲ್ಲಿ ಪಾಲ್ಗೊಂಡು ಧನ್ಯತೆ ಮೆರೆದರು. ನಂತರ ಕಬ್ಬನ್ ಪೇಟೆ ಮೂಲಕ ಸುಣಕಲ್ ಪೇಟೆ ಮಾರ್ಗವಾಗಿ ಕುಲಪುರೋಹಿತರ ಮನೆಯಲ್ಲಿ ಪೂಜೆ ಸ್ವೀಕರಿಸಿ ಇಂದು ಮುಂಜಾನೆ ಸೂರ್ಯೋದಯದ ವೇಳೆಗೆ ಪುರಾಣ ಪ್ರಸಿದ್ದ ಧರ್ಮರಾಯ ದೇವಾಲಯ ಸೇರಿತು. ಕರಗದ ಸಂದರ್ಭದಲ್ಲಿ ದ್ರೌಪದಿ ದೇವಿಯ ಮಾನಸ ಪುತ್ರರೆಂದೇ ಕರೆಯಲಾಗುವ ವೀರಕುಮಾರರು ಕರಗಕ್ಕೆ ಬೆಂಗಾವಲಾಗಿ ನಿಂತಿದ್ದರು. ದಾರಿಯೂದ್ದಕ್ಕೂ ಕಿಕ್ಕಿರಿದು ತುಂಬಿದ್ದ ಭಕ್ತಸಾಗರ ಹೂವಿನ ಕರಗದ ಮೇಲೆ ಹೂವಿನ ಸಿಂಚನ ಮಾಡುತ್ತಾ ಭಕ್ತಿ-ಭಾವ ಸಮರ್ಪಿಸಿದರು.

Leave a Reply

Your email address will not be published. Required fields are marked *