ಸುಪ್ರೀಂಕೋರ್ಟಿನ ಕಾವೇರಿ ನಿರ್ಣಯಕ್ಕೆ ನಾವು ಸಿದ್ಧರಿದ್ದೇವೆಯೇ?

ಮುಂದಿನ ಕೆಲವೇ ದಿನಗಳಲ್ಲಿ ಕಾವೇರಿ ಜಲವಿವಾದದ ಬಗೆಗಿನ ಸರ್ವೋಚ್ಛ ನ್ಯಾಯಾಲಯದ ನಿರ್ಣಯ ಹೊರಬೀಳಲಿದೆ. ಕಾವೇರಿ ನದಿನೀರು ಟ್ರಿಬ್ಯುನಲ್‍ನ ಅಂತಿಮ ಆದೇಶವನ್ನು ಪ್ರಶ್ನಿಸಿದ್ದ ಮೊಕದ್ದಮೆಯ ಹಲವಾರು ವರ್ಷಗಳ ನಂತರದಲ್ಲಿ ಇದೀಗ ಸರ್ವೋಚ್ಛ ನ್ಯಾಯಾಲಯವು ತನ್ನಅಂತಿಮ ಆದೇಶ ನೀಡುತ್ತಿದೆ. ಈ ಆದೇಶದೊಂದಿಗೆ ಕಾವೇರಿ ಜಲವಿವಾದಕ್ಕೆ ಕೊನೆಗೂ ಮುಕ್ತಾಯ ಸಿಗುವುದೆಂದು ಹಲವರು ಕಾಯುತ್ತಿದ್ದಾರೆ. ವಿವಾದ ಮುಕ್ತಾಯಗೊಳಿಸುವುದು ತನ್ನ ವ್ಯಾಪ್ತಿಯಲ್ಲಿಲ್ಲದಿದ್ದರೂ ಸುಪ್ರೀಂಕೋರ್ಟಿನ ನಿರ್ಣಯದಲ್ಲಿ ಈ ಕೆಲವು ಪ್ರಶ್ನೆಗಳನ್ನು ಉತ್ತರಿಸುವ ಸಾಧ್ಯತೆಯಿದೆ.

  1. ಕಾವೇರಿ ಜಲವಿವಾದದ ಐತಿಹಾಸಿಕತೆಯ ಪರಿಶೀಲನೆಯ ಸಂದರ್ಭದಲ್ಲಿ ಸುಪ್ರೀಂಕೋರ್ಟ್ 1947ಕ್ಕೂ ಹಿಂದಿನ ಸ್ವಾತಂತ್ರ್ಯ ಪೂರ್ವ ಬ್ರಿಟಿಷ್ ರಾಜ್ಯಗಳ ಹಾಗೂ ದೇಶೀ ಸಂಸ್ಥಾನಗಳ ನಡುವಣ ಒಡಂಬಡಿಕೆಗಳನ್ನು ತಿರಸ್ಕರಿಸುವ ಸಾಧ್ಯತೆಯಿದೆಯೇ? ಈ ವಿಷಯದಲ್ಲಿ ಸುಪ್ರೀಂ ನಿರ್ಣಯದ ಹಿಂದಿನ ತಾತ್ವಿಕ ತಳಹದಿ ಮತ್ತು ವೈಚಾರಿಕತೆ ಭಾರತದ ವಸಾಹತುಶಾಹಿ ನಂತರದ ಇತಿಹಾಸದಲ್ಲಿ ಹೊಸ ದಿಕ್ಕು ತೋರಬಹುದೇ?
  2. ಕರ್ನಾಟಕದ ವಾದಕ್ಕೆ ಪೂರಕವಾಗಿ ಈ ತೆರನಾದಯಾವುದೇ ಅಂತರರಾಜ್ಯ ಜಲವಿವಾದ ಪರಿಹರಿಸುವ ಮೊದಲುರಾಷ್ಟ್ರೀಯ ನದಿನೀರು ಜಲನೀತಿಯನ್ನು ಘೋಷಿಸಲು ನ್ಯಾಯಾಲಯ ಕೇಂದ್ರಕ್ಕೆ ಸೂಚನೆ ನೀಡಬಹುದೇ? ಈ ತರಹದ ವಿವಾದಗಳನ್ನು ಪರಿಹರಿಸಲು ಬೇಕಾದ ರಾಚನಿಕ ಮತ್ತು ನೀತಿಸ್ವರೂಪದ ಕಾನೂನನ್ನು ರಚಿಸುವ ಅಗತ್ಯವನ್ನು ಸುಪ್ರೀಂ ಎತ್ತಿ ಹೇಳಬಹುದೇ?
  3. ಟ್ರೈಬ್ಯುನಲ್ ನೀಡಿರುವ ಜಲ ಹಂಚಿಕೆಯನ್ನು ಸಾರಾಸಗಟಾಗಿ ಸರ್ವೋಚ್ಛ ನ್ಯಾಯಾಲಯ ಪುಷ್ಟೀಕರಿಸುವುದೇ? ಅಥವಾ ಈ ಟ್ರೈಬ್ಯುನಲ್‍ ಆದೇಶದಲ್ಲಿನ ನ್ಯೂನತೆಗಳನ್ನು ಪಟ್ಟಿ ಮಾಡಿ ಟ್ರೈಬ್ಯುನಲ್‍ಗೆ ಮತ್ತೊಮ್ಮೆ ಈ ವಿಷಯವನ್ನು ಪರಿಶೀಲಿಸಲು ವಾಪಸ್ ಕಳಿಸಬಹುದೇ?
  4. ಟ್ರೈಬ್ಯುನಲ್ ನಿರ್ಣಯವನ್ನು ಸಂಪೂರ್ಣವಾಗಿ ಒಪ್ಪುವ ಅಥವಾ ತಿರಸ್ಕರಿಸುವ ಬದಲು ಟ್ರೈಬ್ಯುನಲ್ ನಿರ್ಣಯದಲ್ಲಿ ಕೆಲವಾರು ಮಾರ್ಪಾಡುಗಳನ್ನು ಮಾಡಿ ಕರ್ನಾಟಕಕ್ಕೆ ಸಿಗಬಹುದಾದ ನೀರಿನ ಪಾಲನ್ನು ಹೆಚ್ಚು/ಕಡಿಮೆ ಮಾಡುವ ಸಂಭವವಿದೆಯೇ?
  5. ಟ್ರೈಬ್ಯುನಲ್‍ನ ಆದೇಶವನ್ನು ಒಪ್ಪುವುದೇ ಆದಲ್ಲಿ ಸುಪ್ರೀಂಕೋರ್ಟ್ ಈ ಆದೇಶದ ಜಾರಿಗೆ ಬೇಕಾದ ಆಡಳಿತಾತ್ಮಕ ವ್ಯವಸ್ಥೆಗೆ ಅನುಮೋದನೆ ನೀಡಲಿದೆಯೇ? ಟ್ರೈಬ್ಯುನಲ್‍ನ ಆದೇಶದಂತೆ ಕಾವೇರಿ ಜಲನಿರ್ವಹಣಾ ಪ್ರಾಧಿಕಾರದ ರಚನೆಗೆ ಹಸಿರು ನಿಶಾನೆ ತೋರಿ ನದಿನೀರಿನ ಮೇಲಿನ ರಾಜ್ಯಗಳ ಹಕ್ಕನ್ನು ಕಸಿದುಕೊಳ್ಳುವ ಸಾಧ್ಯತೆಯಿದೆಯೇ?
  6. ಬಹಳ ಮುಖ್ಯವಾಗಿ, ಟ್ರೈಬ್ಯುನಲ್‍ ತನ್ನ ಆದೇಶದಲ್ಲಿ ಪರಿಗಣಿಸದೇ ಉಪೇಕ್ಷೆ ಮಾಡಿರುವ ಬೆಂಗಳೂರಿನ ಕುಡಿಯುವ ನೀರಿನ ಆದ್ಯತೆಗೆ ಸುಪ್ರೀಂಕೋರ್ಟ್‍ ಆದರೂ ಸ್ವಲ್ಪ ಕನಿಕರ ತೋರಬಹುದೇ? ಈ ಮೂಲಕ ನೀರಾವರಿಗೆತೋರಿದ ಪ್ರಾಮುಖ್ಯತೆಯನ್ನು ಬೆಳೆಯುತ್ತಿರುವ ನಗರಗಳ ಕುಡಿಯುವ ನೀರಿನ ಅಗತ್ಯಗಳಿಗೂ ನ್ಯಾಯಾಲಯ ಆದ್ಯತೆ ನೀಡಬಹುದೇ?

ಸುಪ್ರೀಂಕೋರ್ಟ್ ನಿರ್ಣಯ ಹೇಗಿರಬಹುದೆಂಬುದಕ್ಕೆ ನಾವು ಕಾದು ನೋಡಲೇಬೇಕಾಗಿದೆ. ಆದರೆ ಈ ನಿರ್ಣಯದ ನಂತರದಲ್ಲಿ ಕರ್ನಾಟಕದಲ್ಲಿ ಆಗಬಹುದಾದ ಘಟನೆಗಳಿಗೆ ಕರ್ನಾಟಕ ಸರ್ಕಾರ ಸಿದ್ಧವಾಗಬೇಕಾದ ಅಗತ್ಯವೂಇದೆ.

Leave a Reply

Your email address will not be published. Required fields are marked *